ವೆಂಕಟರಾಮನ್, ಆರ್
 	1910-. ಸ್ವತಂತ್ರ ಭಾರತದ ಎಂಟನೆಯ ರಾಷ್ಟ್ರಪತಿ (1987-92). ಇವರ ಪೂರ್ಣ ಹೆಸರು ರಾಮಸ್ವಾಮಿ ವೆಂಕಟರಾಮನ್. ಇವರು 1910 ಡಿಸೆಂಬರ್ 4ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯ ರಾಜಮಾಡಂ ಗ್ರಾಮದಲ್ಲಿ ಜನಿಸಿದರು. ಸ್ಥಳೀಯ ಶಾಲೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಮದರಾಸು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿಯನ್ನು ಪಡೆದರು. ಇವರ ತಂದೆ ರಾಮಸ್ವಾಮಿಯವರು ವೃತ್ತಿಯಲ್ಲಿ ವಕೀಲರಾಗಿದ್ದರು. ವೆಂಕಟರಾಮನ್ ಅವರು ಮೊದಲಿಗೆ ತಮಿಳುನಾಡಿನ ಉಚ್ಚನ್ಯಾಯಾಲಯದಲ್ಲಿ ಅನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಕೆಲಕಾಲ ವಕೀಲ ವೃತ್ತಿಯನ್ನು ನಿರ್ವಹಿಸಿದರು.

	ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಇವರು 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ, ಎರಡು ವರ್ಷಗಳಕಾಲ ಸೆರೆಮನೆವಾಸ ಅನುಭವಿಸಿದರು. ಜೈಲಿನಿಂದ ಬಿಡುಗಡೆಯಾದ ಅನಂತರ ತಮಿಳು ನಾಡು ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಕಾರ್ಮಿಕ ವಿಭಾಗ ಆರಂಭಿಸಿ, ಕಾರ್ಮಿಕ ಸಂಘಟನೆಗೆ ತೊಡಗಿದರು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಜಪಾನೀಯರ ಪರವಾಗಿ ಮಲಯ ಹಾಗೂ ಸಿಂಗಪುರದ ಮೇಲೆ ಆಕ್ರಮಣ ಮಾಡಿದ್ದ ಭಾರತೀಯರ ಪರವಾಗಿ ವಾದಿಸಲು 1946ರಲ್ಲಿ ಭಾರತ ಸರ್ಕಾರ ನೇಮಿಸಿದ್ದ ವಕೀಲರ ಸಮಿತಿಯ ಸದಸ್ಯರಾಗಿದ್ದರು. 1950ರಲ್ಲಿ ತಾತ್ಕಾಲಿಕವಾಗಿ ಮದರಾಸು ವಿಧಾನಸಭೆಯಿಂದ ಪ್ರಾಂತೀಯ ಸಂಸತ್ತಿಗೆ ಆಯ್ಕೆಯಾದರು. 1952ರ ಮಹಾಚುನಾವಣೆಯಲ್ಲಿ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. 1957ರಲ್ಲಿ ಇವರಿಗೆ ಕಾಮರಾಜ ಅವರು ಸಂಸತ್ತಿಗೆ ರಾಜೀನಾಮೆ ನೀಡುವಂತೆ ತಿಳಿಸಿ, ತಮಿಳುನಾಡು ವಿಧಾನಪರಿಷತ್ತಿಗೆ ನೇಮಕ ಮಾಡಿ ಕೈಗಾರಿಕಾ ಹಾಗೂ ಕಾರ್ಮಿಕ ವ್ಯವಹಾರಗಳ ಮಂತ್ರಿಯನ್ನಾಗಿ ನೇಮಿಸಿದರು. ಈ ಅವಧಿಯಲ್ಲಿ ಇವರು ಕೈಗೊಂಡ ಕ್ರಮಗಳಿಂದಾಗಿ ಹತ್ತು ವರ್ಷಗಳಲ್ಲಿ ತಮಿಳುನಾಡು ದೇಶದಲ್ಲೇ ಮೂರನೆಯ ಅತಿದೊಡ್ಡ ಕೈಗಾರಿಕಾ ರಾಜ್ಯವೆನಿಸಿಕೊಂಡಿತು. ಇವರನ್ನು ತಮಿಳುನಾಡಿನ ಕೈಗಾರಿಕೆಗಳ ಪಿತಾಮಹ ಎಂದೇ ಗುರುತಿಸಲಾಗುತ್ತದೆ. ತಮ್ಮ ವಕೀಲಿವೃತ್ತಿಯಲ್ಲಿ ಆರಂಭದಲ್ಲೇ ಕಾರ್ಮಿಕರಿಗೆ ಸಂಬಂಧಿಸಿದ ಕಾಯಿದೆಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. 1949ರಲ್ಲಿ ಇವರು ಲೇಬರ್ ಲಾ ಜರ್ನಲ್ ಆರಂಭಿಸಿದರು. ಕಾರ್ಮಿಕ ಕಾಯಿದೆಗಳನ್ನು ಕುರಿತ ಅಮೂಲ್ಯ ಆಕರಗಳ ನಿಯತಕಾಲಿಕೆ ಇದಾಗಿದೆ. ಇತರ ಕಾರ್ಮಿಕ ಚಟುವಟಿಕೆಗಳ ಜೊತೆಗೆ ತಮ್ಮ ಸ್ವಂತ ಜಿಲ್ಲೆಯಾದ ತಂಜಾವೂರಿನ ಕೃಷಿಕಾರ್ಮಿಕರ ಸ್ಥಿತಿಗತಿ ಬಗ್ಗೆ ನೇರ ಆಸಕ್ತಿ ತೋರಿದರು.

	ಇವರು 1958ರಲ್ಲಿ ಜಿನೀವದಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಮಿಕರ ಸಂಘಟನೆಯ ಭಾರತೀಯ ನಿಯೋಗದ ನಾಯಕರಾಗಿ, 1950ರಲ್ಲಿ ನ್ಯೂಜಿಲೆಂಡ್‍ನಲ್ಲಿ ನಡೆದ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಕಾನ್ಫರೆನ್ಸ್‍ನ ಹಾಗೂ 1978ರಲ್ಲಿ ವಿಯನ್ನದಲ್ಲಿ ನಡೆದ ಅಂತರ ಪಾರ್ಲಿಮೆಂಟರಿ ಸಭೆಯ ಹಾಗೂ 1957 ಮತ್ತು 1961ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಭಾರತೀಯ ನಿಯೋಗದ ಸದಸ್ಯರಾಗಿದ್ದರು.

	1967ರ ಚುನಾವಣೆಯಲ್ಲಿ ಪರಾಭವ ಹೊಂದಿದರೂ ಯೋಜನಾ ಆಯೋಗದ ಸದಸ್ಯರಾಗಿ ನೇಮಕಗೊಂಡು 1971ರವರೆಗೂ ಕಾರ್ಯನಿರ್ವಹಿಸಿದರು. ಅನಂತರ ಸಿ.ರಾಜಗೋಪಾಲಾಚಾರಿಯವರ ಸ್ವರಾಜ್ಯ ಎಂಬ ಇಂಗ್ಲಿಷ್ ಪತ್ರಿಕೆಯ ಸಂಪಾದಕರಾಗಿದ್ದರು. ತುರ್ತುಪರಿಸ್ಥಿತಿಯ (1975) ಸಮಯದಲ್ಲಿ ಇಂದಿರಾಗಾಂಧೀಯವರಿಗೆ ನಿಷ್ಠರಾಗಿ, ಸಂಪಾದಕತ್ವಕ್ಕೆ ರಾಜೀನಾಮೆ ನೀಡಿದರು. 1980ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಆಯ್ಕೆಗೊಂಡು ಇಂದಿರಾಗಾಂಧೀಯವರ ಸಂಪುಟದಲ್ಲಿ ಹಣಕಾಸು ಖಾತೆ ಮತ್ತು ರಕ್ಷಣಾಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದರು. 1984ರಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಗೊಂಡರು (1984-87). 1987ರಲ್ಲಿ ಜೈಲ್‍ಸಿಂಗ್ ಅವರ ಅಧಿಕಾರಾವಧಿ ಮುಗಿದ ಅನಂತರ ಭಾರತದ ಎಂಟನೆಯ ರಾಷ್ಟ್ರಪತಿಯಾಗಿ ಆಯ್ಕೆಯಾದರು. 1987-92ರವರೆಗಿನ ಇವರ ಅಧಿಕಾರಾವಧಿಯಲ್ಲಿ ಎರಡುವರ್ಷಗಳ ಅವಧಿಯಲ್ಲಿ ಮೂರು ಬಾರಿ ಪ್ರಧಾನ ಮಂತ್ರಿಗಳ ಅಧಿಕಾರ ಬದಲಾಯಿತು. ಇಂಥ ಅನಿಶ್ಚಿತತೆ ಹಾಗೂ ಆತಂಕದ ಪರಿಸ್ಥಿತಿಯಲ್ಲಿ ಸಂವಿಧಾನ ಮತ್ತು ಕಾನೂನು ಬಗೆಗಿನ ಆಳವಾದ ಜ್ಞಾನದ ಮೂಲಕ ದೇಶವನ್ನು ಮುನ್ನಡೆಸಿದರು.

	ಭಾರತದ ರಾಜಕೀಯ ಇತಿಹಾಸದಲ್ಲೇ 1987-92ರ ಅವಧಿ ವಿಶೇಷ ಘಟನಾವಳಿಗಳಿಂದ ಕೂಡಿದ ಅತ್ಯಂತ ಕಷ್ಟದ ಹಾಗೂ ಸವಾಲಿನ ಕಾಲವಾಗಿತ್ತು. ಇಂಥ ಸೂಕ್ಷ್ಮ ಪರಿಸ್ಥಿತಿಯಲ್ಲಿಯೂ ಇವರು ಅತ್ಯಂತ ಚಾಣಾಕ್ಷತನದಿಂದ ಕಾರ್ಯನಿರ್ವಹಿಸಿದರು. ಶ್ರೀಲಂಕಾ ಬಿಕ್ಕಟ್ಟು, ಬೋಫೋರ್ಸ್ ಹಗರಣ, ರಾಜೀವ್‍ಗಾಂಧೀಯವರ ಹತ್ಯೆ ಹಾಗೂ ಹರ್ಷದ್ ಮೆಹತಾ ಷೇರು ಹಗರಣಗಳು-ಈ ಅವಧಿಯ ಪ್ರಮುಖ ಸಂವಿಧಾನಾತ್ಮಕ ಹಾಗೂ ರಾಜಕೀಯ ಸಮಸ್ಯೆಗಳಾಗಿದ್ದವು.

	ಸಾಹಿತ್ಯಾಭಿಮಾನಿಯೂ ಆಗಿರುವ ಇವರು ರಾಜಕೀಯ ನೇತಾರ ಕಾಮರಾಜರ ಸೋವಿಯತ್ ಭೇಟಿ ಕುರಿತು ಬರೆದ ಪ್ರವಾಸ ಸಾಹಿತ್ಯ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಲಭ್ಯವಾಗಿದೆ. ನಿವೃತ್ತಿಯ ಅನಂತರ ಇಂಗ್ಲಿಷ್‍ನಲ್ಲಿ ಮೈ ಪ್ರೆಸಿಡೆನ್ಷಿಯಲ್ ಇಯರ್ಸ್ ಎಂಬ ಕೃತಿಯನ್ನು ರಚಿಸಿದರು. ಪ್ರಸ್ತುತ ನವದೆಹಲಿಯಲ್ಲಿ ವಾಸವಾಗಿರುವ ಇವರು ಸಾಂಸ್ಕøತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬದ್ರ್ವಾನ್, ಮದ್ರಾಸ್, ರೂರ್‍ಕಿ ಹಾಗೂ ನಾಗಾರ್ಜುನ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪದವಿ ಪುರಸ್ಕøತರು.

	ಕಂಚಿ ಶಂಕರಾಚಾರ್ಯರು ಆರ್. ವೆಂಕಟರಾಮನ್ ಅವರಿಗೆ `ಸತ್ ಸೇವಾರತ್ನ ಗೌರವ ಪ್ರಧಾನ ಮಾಡಿದ್ದಾರೆ.

	ಜವರಹರಲಾಲ್ ನೆಹರೂ ಸ್ಮಾರಕ ನಿಧಿ ಉಪಾಧ್ಯಕ್ಷ, ಇಂದಿರಾಗಾಂಧಿ ಸ್ಮಾರಕ ಟ್ರಸ್ಟಿನ ಧರ್ಮಧರ್ಶಿ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.								
(ಎಮ್.ಎಸ್.ಕೆ.ಒ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ